ಕ್ರಿ.ಪೂ. 59 - ಕ್ರಿ.ಶ. 17. ರೋಮ್ ಸಾಮ್ರಾಜ್ಯದ ಪ್ರಸಿದ್ಧ ಇತಿಹಾಸಕಾರ. ವೆನಿಸ್ ನಗರಕ್ಕೆ 35 ಕಿಮೀ ದೂರದಲ್ಲಿರುವ ಪಟವಿಯಲ್ಲಿ ಜನಿಸಿದ. ಈತ ರಚಿಸಿದ ರೋಮಿನ ಇತಿಹಾಸ ಎಂಬ ಉದ್ಗ್ರಂಥ ವಿಖ್ಯಾತವಾಗಿದೆ. ಈತನ 142 ಗ್ರಂಥಗಳಲ್ಲಿ ಕೇವಲ 35 ಮಾತ್ರ ಉಪಲಬ್ಧವಾಗಿವೆ. ಉಳಿದ ಗ್ರಂಥಗಳ ಅಪೂರ್ಣ ಹಸ್ತಪ್ರತಿಗಳು ದೊರೆತಿವೆ. ಸರಳ ಶೈಲಿ, ಸ್ವತಂತ್ರ ಅಭಿಪ್ರಾಯ ಪ್ರತಿಪಾದನೆ ಈತನ ವೈಶಿಷ್ಟ್ಯ. ಈತ ಬಹುಕಾಲ ರೋಮಿನಲ್ಲಿದ್ದ. ಅಗಸ್ಟಸ್‍ನ ಆತ್ಮೀಯ ಸ್ನೇಹಿತನಾಗಿದ್ದ. ಈತನ ಮಗನೂ ಇತಿಹಾಸಕಾರ. ಈತ ಮಗನಿಗೆ ಬರೆದ ಪತ್ರಗಳು, ಪತ್ರ ಸಾಹಿತ್ಯದಲ್ಲೊಂದು ಮೈಲಿಗಲ್ಲು. ಈತನ ಶೈಲಿ, ಐತಿಹಾಸಿಕ ದೃಷ್ಟಿಗಳು ಭವಿಷ್ಯದ ಇತಿಹಾಸಕಾರರಿಗೆ ಮಾರ್ಗದರ್ಶನ ನೀಡಿದವು.	

(ಕೆ.ಎನ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ